Justice for Abhishek 26.01.17 Tumkur

Posted on Posted in Karnataka Field Notes, Streets

ಮೇಲ್ಜಾತಿ ದುರಭಿಮಾನಿಗಳಿಂದ ಹಲ್ಲೆಗೊಳಗಾಗಿ ಸೊಂಟ, ಕಾಲುಗಳಿಗೆ ಬಿದ್ದಿರುವ ಪೆಟ್ಟುಗಳಿಂದ ವಿಪರೀತ ನೋವನುಭವಿಸುತ್ತಾ, ಅದಕ್ಕಿಂತ ಹೆಚ್ಚಾಗಿ ಬೆತ್ತಲೆಯಾಗಿಸಿ ತನ್ನನ್ನು ಥಳಿಸಿದವರ ಕ್ರೌರ್ಯಕ್ಕೆ ಆಘಾತಗೊಂಡು ತುಮಕೂರಿನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಯುವಕ ಅಭಿಷೇಕ್ ಮತ್ತವನ ತಾಯಿ, ತಂದೆಗಳಿಗೆ ನಾವೆಲ್ಲಾ ಬೆಂಬಲವಾಗಿ ನಿಲ್ಲಬೇಕಿದೆ.

ವಿಷಯ ಏನು?

ಹೈಸ್ಕೂಲಿಗೆ ಹೋಗುವ ಹುಡುಗಿಯೊಂದಿಗೆ ಪರಿಚಯವಾಗಿ ಸ್ನೇಹ ಬೆಳೆದು, ಆ ಹುಡುಗಿ ತನ್ನ ತಾಯಿಯ ಮೊಬೈಲಿನಿಂದ ದಿನವೂ ಕರೆ ಮಾಡುತ್ತಿದ್ದುದು ಕಳೆದ ಮೂರ್ನಾಲ್ಕು ತಿಂಗಳಿಂದ ಮಾತಾಡುತ್ತಿದ್ದರು. ಹುಡುಗಿಯ ಅಪ್ಪ ಕಾಡುಪ್ರಕಾಶ್ ಗೆ ಇತ್ತೀಚೆಗೆ ಹೇಗೋ ಈ ವಿಷಯ ತಿಳಿಯಿತು. ಹುಡುಗನ ಬಗ್ಗೆ ವಿಚಾರಿಸಲಾಗಿ ಆತ ಅದೇ ಊರಿನ ಮಾದಿಗರ ಹುಡುಗ ಎಂದು ತಿಳಿದುಬಂತು. ಹುಡುಗಿಯ ಕುಟುಂಬದವರು ಹಿಂದುಳಿದ ವರ್ಗದ ತಿಗಳರ ಸಮುದಾಯ. ಈ ಕಾಡು ಪ್ರಕಾಶ್ ರಿಯಲ್ ಎಸ್ಟೇಟ್, ಇಸ್ಪೀಟ್ ದಂದೆಗಳಲ್ಲಿ ತೊಡಗಿಕೊಂಡು ಹಿಂದೊಮ್ಮೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಊರಿನಲ್ಲಿ ಸಾಕಷ್ಟು ಮೆರೆದವನು. ಈಗ ತನ್ನ ಮಗಳು ಮಾದಿಗ ಹುಡುಗನೊಂದಿಗೆ ಸ್ನೇಹ ಬೆಳೆಸಿರುವುದು ತನ್ನ ಮರ್ಯಾದೆಗೆ ಬಂದ ಕುತ್ತೆಂದು ಭಾವಿಸಿದ್ದಾನೆ. ಮಾತ್ರವಲ್ಲ ನಾಲ್ಕಾರು ಗೂಂಡಾಗಳಿಗೂ ಮಾದಿಗರ ಹುಡುಗ ತಮ್ಮ ಜಾತಿಯ ಹುಡುಗಿಯ ಜೊತೆ ಸ್ನೇಹ ಬೆಳೆಸಲು ಬಿಡಬಾರದು ಎಂದು ಹೇಳಿಕೊಂಡು ಹುಡುಗನನ್ನು trap ಮಾಡಲು ತೀರ್ಮಾನಿಸಿದ್ದಾರೆ. ಕೊನೆಗೆ ಇದೇ ತಿಂಗಳ 17 ನೇ ತಾರೀಖಿನಂದು ಗುಬ್ಬಿಯ ಊರಹೊರಗಿನ ಫಾರ್ಮ್ ಹೌಸ್ ಒಂದರ ಬಳಿ ಉಪಾಯವಾಗಿ ದಲಿತ ಯುವಕ ಅಭಿಷೇಕ್ ನನ್ನು ಕರೆಸಿಕೊಂಡಿದ್ದಾರೆ. ಕೊಡಡಿಯಲ್ಲಿ ಕೂಡಿಹಾಕಿಕೊಂಡು ಹುಡುಗನ ಬಟ್ಟೆಗಳನ್ನು ಹರಿದು ಹಾಕಿ, ಬೆತ್ತಲೆಗೊಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಸ್ಲೇಟೊಂದನ್ನು ನೇತು ಹಾಕಿ ಗುಬ್ಬಿ ಹುಡುಗಿಯರ ಸಹವಾಸಕ್ಕೆ ಬಂದರೆ ಇದೇ ಗತಿ ಎಂಬ ಎಚ್ಚರಿಕೆ ನೀಡಲಾಗಿದೆ. ಅಭಿಷೇಕ್ ಕೂಡಾ ಗುಬ್ಬಿಯವನೇ ಎಂದು ಗೊತ್ತಿದ್ದೂ ಹಾಗೆ ಬರೆದ ಉದ್ದೇಶವೇನೆಂದರೆ ಗುಬ್ಬಿ ಮೇಲ್ಜಾತಿಗೆ ಮಾತ್ರ ಸೇರಿದ್ದು ಎಂಬ ಸಂದೇಶ ನೀಡಲು. ಹೀಗೆ ಅಭಿಷೇಕ್ ನನ್ನು ಬೆತ್ತಲೆ ಕೂರಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದಾರೆ. ಹೊಡೆತದ ನೋವು ತಾಳಲಾರದೇ ಅಭಿಷೇಕ್ ಜೋರಾಗಿ ಚೀರಿ ಅತ್ತು ಎಲ್ಲರಲ್ಲೂ ತಪ್ಪಾಯ್ತು ಎಂದು ಕೇಳಿಕೊಂಡರೂ ಬಿಡದೇ ಹೊಡೆದಿದ್ದಾರೆ. ಇನ್ನೇನು ಸತ್ತೇ ಹೋಗುವ ಪ್ರಜ್ಞಾಹೀನ ಸ್ಥಿತಿಯಲ್ಲಿ ಪಕ್ಕದ ಸ್ಮಶಾನದಲ್ಲಿ ಹೆಣಕ್ಕೆ ಹೊದಿಸಿದ್ದ ಬಟ್ಟೆಯೊಂದರಲ್ಲಿ ಅಭಿಷೇಕ್ ದೇಹವನ್ನು ಸುತ್ತಿ ತಂದು ಒಂದು ಕಡೆ ಹಾಕಿದ್ದಾರೆ. ಇದನ್ನು ದೂರದಿಂದ ನೋಡಿದ ವ್ಯಕ್ತಿಯೊಬ್ಬರು ಇತರರಿಗೆ ತಿಳಿಸಿ ಅಭಿಷೇಕ್ ಮನೆಯವರು, ಗೆಳೆಯರು ಮನೆಗೆ ಎತ್ತಿಕೊಂಡು ಬಂದು ಮಲಗಿಸಿದ್ದಾರೆ. ಆದರೆ ಅಭಿಷೇಕ್ ಗೆ ಯಾರು ಹೊಡೆದರು ಯಾಕಾಗಿ ಹೊಡೆದರು ಯಾವ ವಿಷಯವೂ ಯಾರಿಗೂ ತಿಳಿದಿರಲಿಲ್ಲ.
ಕಾಡುಪ್ರಕಾಶ ಮತ್ತವನ ಗ್ಯಾಂಗ್ ಅಭಿಷೇಕ್ ಗೆ ಅವಮಾನಿಸಿ ಹೊಡೆಯುವುದನ್ನು ಮೊಬೈಲಿನಲ್ಲಿ ವಿಡಿಯೋ ತೆಗೆದು ಅದೇ ರಾತ್ರಿ ವಾಟ್ಸಾಪ್ ಮೂಲಕ ಹೊರಜಗತ್ತಿಗೆ ಬಿಟ್ಟಿದೆ. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗು ಟೀವಿ ಮಾಧ್ಯಮಗಳಲ್ಲೂ ಪ್ರಸಾರವಾದ ಮೇಲೆ ಅಭಿಷೇಕ್ ಕುಟುಂಬಕ್ಕೆ ಎಲ್ಲರೂ ಬಂದು ವಿಷಯ ತಿಳಿಸಿದ್ದಾರೆ. ಕೂಡಲೇ ಪೊಲೀಸರೂ ಬಂದು ವಿಚಾರಣೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಅಭಿಷೇಕ್ ಮತ್ತು ಕಾಡುಪ್ರಕಾಶ್ ನಡುವೆ ಸ್ನೇಹ ಇತ್ತು. ಅಭಿಷೇಕ್ 19 ವರ್ಷದ ಹುಡುಗ, ಆಕೆ 15 ವರ್ಷದ 9 ನೇ ತರಗತಿ ಹುಡುಗಿ. ಇಬ್ಬರೂ ಹದಿಹರೆಯದ ವಯಸ್ಸಿನಲ್ಲಿ ದಾರಿ ತಪ್ಪುವ ಅನೇಕ ಹುಡುಗ ಹುಡುಗಿಯರಂತೆ ದಾರಿ ತಪ್ಪಿದವರು. ಈ ಪ್ರಕರಣ ಸಂಬಂಧಿಕರಲ್ಲಿ ಅಥವಾ ಒಂದೇ ಜಾತಿಯಲ್ಲಿ ನಡೆದಿದ್ದಲ್ಲಿ ಇಷ್ಟು ಗಂಭೀರ ರೂಪ ಪಡೆಯುತ್ತಿರಲಿಲ್ಲ. ದೊಡ್ಡವರು ಬುದ್ದಿ ಹೇಳಿ ಇಬ್ಬರಿಗೂ ಎಚ್ಚರಿಕೆ ಮಾತು ಹೇಳುತ್ತಿದ್ದರು. ಆದರೆ ಹುಡುಗ ದಲಿತನಾದ ಕಾರಣದಿಂದಲೇ ಮುಂದೆ ಇದು ಎಲ್ಲರಿಗೂ ಪಾಠವಾಗಲಿ ಎಂದೇ ಮೇಲ್ಜಾತಿಯ ಗ್ಯಾಂಗ್ ಇಂತಹ ಕ್ರೂರ ಕೃತ್ಯವೆಸಗಿದೆ‌ . ಕನಿಷ್ಠ ಒಂದು ದೂರು ನೀಡಿ ಪೊಲೀಸರಿಂದ ಎಚ್ಚರಿಕೆ ಹೇಳಿಸಿದ್ದರೆ ಆಗುತ್ತಿತ್ತು. ಆದರೆ ತಾವೇ ಅಮಾನುಷ ರೀತಿಯಲ್ಲಿ ಶಿಕ್ಷೆ ನೀಡುವ ಮಟ್ಟಕ್ಕಿಳಿದಿದ್ದು ಅವರ ದುಷ್ಟತನವನ್ನು ತೋರುತ್ತದೆ.
ಹಾಗೆ ನೋಡಿದರೆ ತಿಗಳರ ಸಮುದಾಯವೇನೂ ಸಾಮಾಜಿಕವಾಗಿ ಅತ್ಯಂತ ಮುಂದುವರಿದ ಅಥವಾ ಮೇಲರ್ವರ್ಗವಲ್ಲ. ಕಷ್ಟಪಟ್ಟು ದುಡಿದು ಬದುಕುವ ಶ್ರಮಿಕ ಸಮದಾಯವೇ ಇದಾಗಿದೆ. ಆದರೆ ಭಾರತದ ಬ್ರಾಹ್ಮಣಶಾಹಿ ಹಿಂದೊಮ್ಮೆ ಸಮಾಜದ ಮೇಲೆ ಹೇರಿರುವ ಜಾತಿಭೇಧದ ಪದ್ಧತಿ ಈ ಸಮುದಾಯ ಮಾತ್ರವಲ್ಲದೇ ಎಲ್ಲಾ ಜಾತಿಗಳೂ ದಲಿತ ಜಾತಿಗಳನ್ನು ಕೀಳಾಗಿ ನೋಡಲು ಕಾರಣವಾಗಿದೆ. ಹೊಲೆಮಾದಿಗರು ಕೀಳೆಂಬ ಮನೋಭಾವ ಬಲವಾಗಿರುವ ಕಾರಣದಿಂದ ಇಂತಹ ಜಾತಿದೌರ್ಜನ್ಯ ನಡೆದಿದೆ.

ಅಭಿಷೇಕ್ ಮೇಲೆ ಪೋಕ್ಸೋ!

ಮಾಧ್ಯಮದಲ್ಲಿ ಪ್ರಚಾರವಾಗಿ, ಅಭಿಷೇಕ್ ಮೇಲಿನ ಹಲ್ಲೆ ಯನ್ನು ಇಡೀ ರಾಜ್ಯದ ಜನ ನೋಡಿದಾಗ, ಛೇ ಆ ಹುಡುಗನನ್ನು ಹೀಗೆ ಹೊಡೆಯುವುದಾ? ಒಂದು ವೇಳೆ ತಪ್ಪನ್ನೇ ಮಾಡಿದ್ದರೂ ಕೋರ್ಟು ಕಾನೂನು ಇರುವುದು ಏಕೆ ಎಂಬ ಪ್ರಶ್ನೆ ಸಹಜವಾಗಿ ಬಂದಿದೆ. ಬಹಿರಂಗವಾಗಿಯೇ ಸಾಕ್ಷಿ ಸಿಕ್ಕಿದ ಮೇಲೆ ಪೊಲೀಸರು ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ. ನಾಲ್ವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಆದರೆ ಪೊಲೀಸರು ಹಾಕಿರುವ ಎಲ್ಲಾ ಕೇಸುಗಳೂ bailable ಆಗಿ ಆರೋಪಿಗಳು ಜಾಮೀನು ಪಡೆದು ಹೊರಬರಬಹುದು. ಯಾವಾಗ ತಮ್ಮ ಮೇಲೆ ಟೀಕೆ ಆರಂಭವಾಯಿತೋ ಆಗ ಕಾಡುಪ್ರಕಾಶನ ಕಡೆಯವರು ಹೊಸದೊಂದು ಕತೆ ಕಟ್ಟಿ ತಮ್ಮ ಮಗಳಿಗೆ ಅಭಿಷೇಕ್ ಚುಡಾಯಿಸಿದ್ದ, ಹೆದರಿಸಿದ್ದ ಇತ್ಯಾದಿ ಹೇಳಲು ತೊಡಗಿದ್ದಲ್ಲದೇ ಹುಡುಗಿ ಹಾಗೂ ಹುಡುಗಿಯ ತಾಯಿ ಮಾಧ್ಯಮದ ಎದುರು ಸುಳ್ಳು ಹೇಳುವಂತೆ ಮಾಡಿದ್ದಾರೆ. ಅವರ ಮನೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಎದುರು ಸಹ ಹೀಗೇ ಹೇಳಿ ಕಳಿಸಿದ್ದಾರೆ.ಈಗ ಇದೇ ಅರೋಪವನ್ಬಿಟ್ಟುಕೊಂಡು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ರೂಪಿಸಿರುವ ಪೋಕ್ಸೋ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಅಭಿಷೇಕ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಡೀ ರಾಜ್ಯವೇ ಸಾಕ್ಷಿಯಾಗಿರುವ ಜಾತಿ ದೌರ್ಜನ್ಯ ಪ್ರಕರಣವೊಂದನ್ನು ಹಳ್ಳಹಿಡಿಸಲು ಮಾಡಿರುವ ಈ ಚಿತಾವಣೆಯನ್ನು ಎಲ್ಲರೂ ಖಂಡಿಸಬೇಕಿದೆ.
ಅಭಿಷೇಕ್ ಹೇಳುವುದೇನು?

ಸೊಂಟಕ್ಕೆ ಬಿದ್ದ ದೊಣ್ಣೆಯ ಏಟಿನಿಂದ ಕಿಡ್ನಿ ಸಮಸ್ಯೆ ಉಂಟಾಗಿ ಮೂತ್ರವೂ ಸರಿಯಾಗಿ ಹೋಗದೇ ತೀವ್ರ ನೋವು ಅನುಭವಿಸುತ್ತಿರುವ ಅಭಿಷೇಕ್ ಈಗ ಹೇಳುವುದು ಒಂದೇ ಮಾತು. “ನಾನು ಆಕೆಗೆ ಯಾವತ್ತೂ ಚುಡಾಯಿಸಿಲ್ಲ.ದೌರ್ಜನ್ಯ ನಡೆಸಿಲ್ಲ. ಪ್ರತಿದಿನ ಅವಳೇ ತನ್ನ ತಾಯಿಯ ಮೊಬೈಲಿನಿಂದ ಕಾಲ್ ಮಾಡಿ ಮಾತಾಡುತ್ತಿದ್ದಳು. ಅವರಪ್ಪ ಕಿತ್ತುಕೊಂಡಿರುವ ನನ್ನ ಮೊಬೈಲ್ ಕೊಡಿಸಿ. ಅದರಲ್ಲಿ ರೆಕಾರ್ಡಿಂಗ್ ಇದೆ. ನಾನು ಇತ್ತೀಚೆಗೆ ಐಯಪ್ಪ ಸ್ವಾಮಿಗೆ ಮಾಲೆ ಹಾಕಿ ವಾಪಾಸು ಬಂದ ಮೇಲೆ ಅವಳು ಕರೆ ಮಾಡಿ ಅವರ ತಂದೆಗೆ ವಿಷಯ ತಿಳಿದಿದೆ ಎಂದೂ, ನೀನು ಊರು ಬಿಟ್ಟು ಹೋಗು ಎಂದೂ ತಿಳಿಸಿದ್ದಳು. ಆದರೆ ನಾನು ಯಾವ ತಪ್ಪೂ ಮಾಡಿರಲಿಲ್ಲವಾದ್ದರಿಂದ ನನ್ನ ಪಾಡಿಗೆ ಇದ್ದೆ”
“ನನಗೆ ನ್ಯಾಯ ಬೇಕು ಸಾರ್” ಎಂದು ಅಭಿಷೇಕ್ ಹೇಳುವ ಅಭಿಷೇಕ್ ಗೆ ಈಗ ನ್ಯಾಯ ನೀಡುವರು ಯಾರು?
ಅಭಿಷೇಕ್ ಕುಟುಂಬ ಇರುವ ಗುಬ್ಬಿಯ ಬಿಜೆಆರ್ ನಗರದಲ್ಲಿ ಪ್ರತಿಯೊಬ್ಬರೂ ಭಯಭೀತರಾಗಿದ್ದಾರೆ. ಅಭಿಷೇಕ್ ಗೆ ಹೊಡೆಯುವಾಗ, ಹೊಡೆದ ನಂತರದಲ್ಲಿ ಸವರ್ಣೀಯರು ದಲಿತರೆಲ್ಲರ ಬಗ್ಗೆ ಅವಾಚ್ಯವಾಗಿ ಬೈದಿರುವುದಲ್ಲದೇ ಎಲ್ಲರಿಗೂ ಇದೇ ಗತಿಯಾಗುತ್ತದೆ ಎಂಬಂತೆ ಮಾತಾಡಿರುವುದು ದಲಿತ ಕಾಲೋನಿಯ ಜನರಲ್ಲಿ ಭಯ ಹುಟ್ಟಿಸಿದೆ. ಮಾತ್ರವಲ್ಲ ಕೆಲವು ಮಾಧ್ಯಮಗಳಲ್ಲಿ ಈ ಕಾಲೋನಿಯ ಕೂಲಿ ಮಾಡಿಕೊಂಡು ಬದುಕುತ್ತಿರುವ ಯುವಕರನ್ನು ಕೀಳಾಗಿ ಬಿಂಬಿಸಿರುವುದರಿಂದ ಆ ಯುವಕರು ನೊಂದುಕೊಂಡಿದ್ದಾರೆ‌. “ಸಾರ್, ಅಭಿಷೇಕ್ ಕೂಡಾ ಯಾರೊಂದಿಗೂ ಹಾಳು ತಂಟೆಗೆ ಹೋದವನಲ್ಲ. ಆಟೋ ಓಡಿಸಿಕೊಂಡು ನಾಲ್ಕು ಕಾಸು ಸಂಪಾದಿಸಿಕೊಂಡು ಕುಟುಂಬಕ್ಕೆ ಸಹಾಯವಾಗಿ ನಿಂತಿದ್ದವನು. ಇಲ್ಲಿರುವ ಎಲ್ಲರೂ ಕೂಲಿ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ಮೊನ್ನೆ ಸಮಯ ಟೀವಿಯಲ್ಲಿ ನಾವೆಲ್ಲ ಕೆಟ್ಟವರು ಅನ್ನುವಂತೆ ಹೇಳಿದ್ದು ನಮಗೆ ನೋವಾಗಿದೆ” ಎನ್ನುತ್ತಾರೆ ಮಂಜುನಾಥ್ ಎಂಬ ಯುವಕ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ವಿಚಾರಿಸಲಾಗಿ, ಇದುವರೆಗೆ ಅಭಿಷೇಕ್ ಮೇಲೆ ಯಾವುದೇ ದೂರು ದಾಖಲಾಗಿಲ್ಲ , ಅಥವಾ ಯಾವುದೇ ಕಿರಿಕ್ ಮಾಡಿಕೊಂಡು ಆತ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿಲ್ಲ ಎನ್ನುವುದು ದೃಢವಾಯಿತು. “ನಾವು ನಮ್ಮ ಮಗನಿಗೆ ಹೀಗೆ ಹೊಡೆದಿದ್ದಾರೆ ಎಂದು ತಿಳಿದಾಗ ಯಾರಿಗೂ ಜೀವವೇ ಬೇಡ, ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಎನ್ನಿಸಿತ್ತು. ಆದರೆ ಬೇರೆ ಬೇರೆ ಊರುಗಳ ಜನ ಬಂದು ನಮಗೆ ಧೈರ್ಯ ಹೇಳಿದ್ದಾರೆ. ನಾವು ಯಾರಿಗೂ ಅನ್ಯಾಯ ಮಾಡಿದೋರಲ್ಲ. ನಮ್ಮ ಮಗನಿಗೆ ಹೀಗಾಗಿರೋದು ನೋಡಿ ನಮ್ಮ ದುಃಖ ಯಾರಿಗೆ ಹೇಳಿಕೊಳೋದು ಸಾರ್? ನಮಗೆ ನ್ಯಾಯ ಬೇಕು. ನನ್ನ ಮಗ ತಪ್ಪು ಮಾಡಿದ್ದರೆ ನಾವೇ ಪೊಲೀಸರತ್ರ ಕೊಡ್ತಾ ಇದ್ವಿ. ಆದರೆ ಅವನ ಯಾವ ತಪ್ಪೂ ಇಲ್ಲದೇ ಹೀಗೆ ಸಾಯುವ ಹಾಗೆ ಹೊಡೆದಿದ್ದಾರೆ..” ಎಂದು ಕಣ್ಣೀರು ಹಾಕುತ್ತಾರೆ ಅಭಿಷೇಕ್ ತಾಯಿ.
ನಾಡಿನ ಪ್ರಜ್ಞಾವಂತರೆಲ್ಲ ಈಗ ಮೌನವಹಿಸುವುದು ದಲಿತ ಯುವಕ ಅಭಿಷೇಕ್ ಮೇಲೆ ಜಾತಿ ದುರಭಿಮಾನಿಗಳು ಮಾಡಿದ ದೌರ್ಜನ್ಯ ಮಾಡಿದಷ್ಟೇ ಅನ್ಯಾಯ. ಈ ಸಂದರ್ಭದಲ್ಲಿ ದುರುದ್ದೇಶದಿಂದ ಅಭಿಷೇಕ್ ಮೇಲೆ ಪೋಕ್ಸೋ ಕೇಸ್ ಹಾಕಿರುವುದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಅಭಿಷೇಕ್ ಮೇಲೆ ದೌರ್ಜನ್ಯ ಮಾಡಿ ಸಂವಿಧಾನ, ಕಾನೂನನ್ನು ಗಾಳಿಗೆ ತೂರಿ ತಮ್ಮ ಸಮುದಾಯದ ಮರ್ಯಾದೆ ತೆಗದ ಕಾಡುಪ್ರಕಾಶ್ ಮತ್ತವನ ಗ್ಯಾಂಗಿಗೆ ಸ್ವತಃ ತಿಗಳರ ಸಮುದಾಯ ಛೀಮಾರಿ ಹಾಕಬೇಕು. ದೂರದ ಗುಜರಾತ್, ಹರ್ಯಾಣಗಳ ಘಟನೆಗಳಿಗೆ ಮರುಗುವ ನಾವು ನಮ್ಮ ಕಾಲಬುಡದಲ್ಲೇ ಅಮಾನುಷ ದೌರ್ಜನ್ಯವೊಂದು ನಡೆದಾಗ ತೋರಬೇಕಾದ ಪ್ರತಿಕ್ರಿಯೆ ಏನು? ಯಾಕೆ ಗುಬ್ಬಿಯ ದಲಿತ ಯುವಕನ ಮೇಲಿನ ಈ ದೌರ್ಜನ್ಯದ ಬಗ್ಗೆ ಪ್ರಗತಿಪರ, ದಲಿತಪರ ಸಂಘಟನೆಗಳು ಒಕ್ಕೊರಲಿನಿಂದ ಮಾತಾಡುತ್ತಿಲ್ಲ?
ಅಭಿಷೇಕ್ ಮೇಲಿನ ಹಲ್ಲೆಯಾದ ಕೆಲ ದಿನಗಳಲ್ಲಿ ಚಿಕ್ಕಬಳ್ಳಾಪುರದ ಮಂಡಿಕಲ್ ಹೋಬಳಿಯ ಗುಡಿಬಂಡೆಯಲ್ಲಿ ಇದೇ ರೀತಿ ಪ್ರಕರಣವೊಂದರಲ್ಲಿ 9 ನೇ ತರಗತಿಯ ಎನ್ ಮುರಳಿ ಎಂಬ ದಲಿತ ಹುಡುಗನನ್ನು ಸವರ್ಣೀಯರು ಥಳಿಸಿದ ಪರಿಣಾಮವಾಗಿ ಆ ಹುಡುಗ ಮನನೊಂದು ಮರಕ್ಕೆ‌ನೇಣು ಹಾಕಿಕೊಂಡು ಸತ್ತಿದ್ದಾನೆ.
ಹಾಗಾದರೆ ಇಂತಹ ಜಾತಿಯ ಹೆಸರಿನ ದೌರ್ಜನ್ಯ, ಕಗ್ಗೊಲೆಗಳಿಗೆ ಅಂತ್ಯವಿಲ್ಲವೇ? ದಲಿತ, ದಮನಿತ, ಹಿಂದುಳಿದ ಎಲ್ಲರೂ ಈ ಜಾತಿ ದುರಭಿಮಾನವನ್ನು ವಿರೋಧಿಸಿ ನ್ಯಾಯಕ್ಕಾಗಿ ಹೋರಾಡಿ ನ್ಯಾಯ ಪಡೆಯುವ ಮೂಲಕ ಮಾತ್ರವೇ ಈ ಜಾತಿದೋಷದ ದೇಶದಲ್ಲಿ ನ್ಯಾಯ ನೀತಿ ಸ್ಥಾಪನೆಯಾಗಲು ಸಾಧ್ಯ!
ಆದ್ದರಿಂದ ತಾವೆಲ್ಲರೂ ದಯಮಾಡಿ
ಇದೇ ಗುರುವಾರ ದಿನಾಂಕ 26.1.2017ರಂದು ತುಮಕೂರು ಅಂಬೇಡ್ಕರ್ ಭವನದಲ್ಲಿ ಸಮಯ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ನಾವೆಲ್ಲ ಸಮಾನ ಮನಸ್ಕರು, ಸಂಘಟನೆಗಳು, ಬುದ್ಧಿಜೀವಿಗಳು, ವಿಚಾರವಂತರು, ಹೋರಾಟಗಾರರು ಸೇರಿಕೊಳ್ಳೋಣ. ಗುಬ್ಬಿ ತಾಲೂಕಿನ ನಮ್ಮ ಸಹೋದರ ಅಭಿಶೇಕನಿಗೆ ನ್ಯಾಯ ಕೊಡಿಸಲು ಪಣ ತೊಡೋಣ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಬಿ.ಆರ್.ಬಾಸ್ಕರ್ ಪ್ರಸಾಧ್ – 9844574724
ಗೌರಿ – 8971232329
– ಹರ್ಷಕುಮಾರ್ ಕುಗ್ವೆ

Source: https://www.facebook.com/bhaskar.prasad.771/posts/1067402533387222

Leave a Reply